ಶ್ರೀನಿವಾಸ ರಂಗಾಚಾರ್ಯ
	1879-1960. ಹಿರಿಯ ತಲೆಮಾರಿನ ಕನ್ನಡ ಮತ್ತು ಸಂಸ್ಕøತ ವಿದ್ವಾಂಸರು. ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ತಾಲ್ಲೂಕಿನ ಶ್ರೀರಂಗರಾಜಪುರ ಅಗ್ರಹಾರ ಇವರ ಸ್ಥಳ. ತಿರುಮಲೆ ತಿರುಮಲಾಚಾರ್ಯರು ಇವರ ತಂದೆ. ಸ್ವಂತ ಊರಿನಲ್ಲಿಯೇ ಸಂಸ್ಕøತ ಮತ್ತು ವೇದಾಂತಶಾಸ್ತ್ರ ವ್ಯಾಸಂಗ ನಡೆಯಿತು. ಅನಂತರ ಶಿಕ್ಷಣ ಸಂಸ್ಥೆಗಳಲ್ಲಿ ಕ್ರಮವಾಗಿ ವ್ಯಾಸಂಗ ಮಾಡಿ ಕನ್ನಡ ಪಂಡಿತ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಸರ್ಕಾರಿ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾ ಉಪಾಧ್ಯಾಯರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಇವರು, ಮೈಸೂರಿನ ಉಪಾಧ್ಯಾಯ ಶಿಕ್ಷಣ ಶಾಲೆಯಲ್ಲಿ ಪ್ರಧಾನ ಕನ್ನಡ ಪಂಡಿತರಾಗಿ ಸೇವೆಸಲ್ಲಿಸಿ ನಿವೃತ್ತರಾದರು.

	ಕನ್ನಡ ಮತ್ತು ಸಂಸ್ಕøತದಲ್ಲಿ ಒಳ್ಳೆಯ ಪಾಂಡಿತ್ಯ ಸಂಪಾದಿಸಿಕೊಂಡಿ ದ್ದರು. ಅನೇಕ ಲೇಖನಗಳನ್ನೂ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ರನ್ನ, ಮುದ್ದಣ ಮೊದಲಾದ ಕೆಲವು ಕನ್ನಡ ಕವಿಗಳನ್ನು ಕುರಿತು ವಿಮರ್ಶಾ ಲೇಖನಗಳನ್ನು ಬರೆದಿದ್ದಾರೆ. ಶಬ್ದಮಣಿದರ್ಪಣವನ್ನು ಕುರಿತು ಬರೆದ ವಿಮರ್ಶಾ ಲೇಖನಗಳು ಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದವು. ಕರ್ನಾಟಕ ಮೂಲಾದರ್ಶ ಮತ್ತು ಮೈಸೂರು ಮೆಯ್ಸಿರಿ ಎಂಬ ಎರಡು ಗ್ರಂಥಗಳನ್ನು ರಚಿಸಿದ್ದಾರೆ. ಇವರ ಪಾಂಡಿತ್ಯವನ್ನು ಮೆಚ್ಚಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಇವರನ್ನು ತಮ್ಮ ಆಸ್ಥಾನವಿದ್ವಾಂಸರಾಗಿ ನೇಮಿಸಿಕೊಂಡು ಗೌರವಿಸಿದರು.		
												(ಎಚ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ